ಮನಸ್ಸೆಂಬ ಅಗ್ನಿಕುಂಡ
ಹದಿನಾರು
ವರ್ಷಗಳ ಗಾಂಧಿ ಕುರಿತ ಭಾರವನ್ನು “ಗಾಂಧಿ:ಮುಗಿಯದ ಅಧ್ಯಾಯ”ದೊಳಗೆ ಸುರಿದು ನಾನು ಮುಖ ಮಾಡಿದ್ದು
ಸೂಫಿಗಳ ಕಡೆಗೆ. ಸಾವಿಲ್ಲದ ಸಾಹಿತ್ಯ ಬರೆದಿಟ್ಟವರು ಸೂಫಿಗಳು. ನಮ್ಮ ನಿಮ್ಮಂತೆ ಸಂಸಾರದೊಳಗಿದ್ದೂ
ಸಂದೇಹಗಳಿಲ್ಲದ ಸಂದೇಶಗಳನ್ನು ಕೊಟ್ಟ ಸಾರ್ವತ್ರಿಕರು, ಸರ್ವಕಾಲಿಕರು, ಸಮಾವಿಷ್ಟದ ಮಹಾ ಸಂಕೇತಗಳಿವರು.
ನಾನು ಬೇಲೂರು ಬಿಟ್ಟಾಗ 28/12/2012, ಇದೊಂದು ರೀತಿಯ ಕೊನೆಯ ಪಯಣ. ರಾಬರ್ಟ್ ಬ್ರಿಜಿಸ್ಸ್‍ನ ದ ಲಾಷ್ಟ
ರೈಡ್ ಟುಗೆದರದಂತೆ. ಮುಪ್ಪಾದ ನಮ್ಮ ಮಾರುತಿ ಝನ್ನಿನ ಮನಸ್ಸೂ ನನ್ನಂತೆಯೇ. ಈ ಕಾರು, ಪ್ರೀತಿಯ ಗೆಳತಿ,
ಅವಳ ಸಾವಿರಾರು ಸಂದೇಹ, ಸಮಾಧಾನಗಳು ಜೊತೆಗೆ ಮಾತೆಂದರೆ ಮುನಿಸಿಕೊಳ್ಳುವ ಮಗ. ಹೀಗೆ 28 ರ ಮುಂಜಾವು
ಹೊರಟ ನಾವು ಹೋಗಿ ತಲುಪಿದ್ದು ಬೆಳಗಾವಿಯನ್ನು. ದಲಿತ ಸಾಹಿತ್ಯ ಸಮ್ಮೆಳನದಲ್ಲಿ ಅವಳ ಪ್ರಶಸ್ತಿ ಸಮಾರಂಭವನ್ನು
ಮುಗಿಸಿಕೊಂಡು ನಾನು ಹೊರಡಬೇಕಾದುದ್ದೇ ಈ ಸೂಫಿಗಳ ಕಡೆಗೆ. ನಾದ ಲೋಕದ ಎಡೆಗೆ. ಎಪ್ಪತ್ತರಾಚೆ ಇರುವ
ಅಪ್ಪ, ಅರವತ್ತರ ಗಡಿಯಲ್ಲಿರುವ ಅವ್ವ ಅದೆಷ್ಟು ಖುಷಿ ಪಟ್ಟರೊ. ನಾಲ್ಕು ವರ್ಷಗಳ ನಂತರ ಮೊದಲ ಬಾರಿಗೆ
ಹೆತ್ತವರನ್ನು ತೀರ್ಥ ಯಾತ್ರೆಗೆ ಕರೆದುಕೊಂಡು ಹೊರಟ ನನ್ನಂಥ ಆಧುನಿಕ ಶ್ರವಣಕುಮಾರರಿಗೆ ಅದೇನು ಹರಕೆ
ಇಟ್ಟರೊ. ಧಾರವಾಡದಿಂದ ಶಿರಹಟ್ಟಿಯ ಫಕೀರೆಶ್ವರನ ಕಡೆಗೆ ಹೊರಟಾಗ ದಿನಾಂಕ 31/12/2012, ವರ್ಷದ ಕೊನೆಯ
ದಿನ ನಾ ಹಿಡಿಯಲು ಹೊರಟ ನನ್ನ ಗುರು ನನ್ನಂತೆ ಅಲೆಮಾರಿಯಾಗಿದ್ದ. ಶಿರಹಟ್ಟಿಗೆ ಹೋದ ನಮ್ಮನ್ನ ಲಕ್ಷ್ಮೇಶ್ವರಕ್ಕೆ
ಕರೆದೊಯ್ದ, ಸಾರ್ವಜನಿಕ ಸಭೆಯೊಂದರ ವೇದಿಕೆಯಿಂದ ಕೆಳಗಿಳಿದು ಬರುತ್ತಲೇ ಸಂಶಿಗೆ ಹೋಗೋಣ ನಡೆ ಎಂದರು.
ನಮ್ಮದು ಗುಡಿಗೇರಿ ದ್ಯಾಮವ್ವನ ಬೆನ್ನು ಹತ್ತಿದ ಶರೀಫ ಮತ್ತು ಗುರು ಗೋವಿಂದ ಭಟ್ಟರ ಸ್ಥಿತಿಯಾಗಿತ್ತು.
ಸಂಶಿಯ ಮಠದಲ್ಲಿ ಅಷ್ಟಿಷ್ಟು ಆಧ್ಯಾತ್ಮ, ಭಾವೈಕ್ಯದ ಕನಸು ಕಾಣುತ್ತಿರುವಾಗ ಹೊಸ ವರ್ಷ ಕಣ್ತೆರೆಯಿತು.
ಈ ಖುಷಿಗೆ ಜೊತೆಗಿದ್ದ ಸದ್ಗುರುವಿನ ಪಾದ ಮುಟ್ಟಿ, ತಂದೆ-ತಾಯಿಗಳ ಆಶಿರ್ವಾದ ಪಡೆಯುತ್ತಿರುವಾಗ ಮನಸ್ಸು
ಕುವೆಂಪುವಿನ ಕಲ್ಕಿ ಪದ್ಯವನ್ನು ಹೇಳುತ್ತಿತ್ತು
ಕನಸೊಡೆದೆದ್ದೆ
ಇನ್ನೆಲ್ಲಿಯ
ನಿದ್ದೆ
ಬೆಳಗಾದರೆ
ಶರೀಫನ ಹುಲಗುರು ಸಂತೆಗೆ ಹೋಗುವ ಆಸೆ, ಇರುವ ಇರದಿರುವ ದಾರಿಗಳನ್ನೆಲ್ಲ ಸುತ್ತಿ ಹುಲಗುರು ಬಸ್ಟ್ಯಾಂಡಿನ
ಮುಂದೆ ಕುಳಿತು ಚಹಾ ಹೀರುವಾಗ ಕಂಡ ಕಂಡ ಮುದುಕಿಯರ ಕಣ್ಣಲ್ಲೂ ಶರೀಫನ ಕವನ. ಸಂತೆಯ ಸಂದಿ ಸಂದಿಯಲ್ಲಿ
ಸಿಕ್ಕವರಿಗೂ ನಿನಗ ಲೋಕದ ಚಿಂತಿ ಯಾಕ ಎಂದು ಕೇಳಿದ್ದ ಶರೀಫ, ತಾಳಿದ ಕೋಟಿ ಕೋಟಿ ಅವತಾರಗಳನ್ನು ಹುಲಗುರಿನಲ್ಲಿ
ನೋಡುವ ತವಕ. ಮುಂದೆ ಹೊರಟು ಶಿಶುನಾಳ ತಲುಪಿದಾಗ ಎಷ್ಟೊಂದು ಬಿಸಿಲು, ಊರ ಹೊರಗಿನ ಮೂರು ಎಕರೆಯ ತನ್ನ
ಹೊಲದಲ್ಲಿಯೇ ತಣ್ಣಗಿದ್ದಾನೆ ಶರೀಫ. ಆತನ ಸಮಾಧಿಯ ತಲೆಗೆ ಶಿಶುನಾಳಧಿಶ ಬಸವಣ್ಣ, ಮೇಲೆ ಬೇವು, ಮಲ್ಲಿಗೆ
ಮರಗಳು, ಈ ಶರೀಫನನ್ನೊಬ್ಬ ಪವಾಡ ಪುರುಷನೆಂದು ಕೈ ಮುಗಿಯುವವರಿಗೆ ನವಿಲು ಗರಿ ಮುಟ್ಟಿಸಲು ಅಲ್ಲೊಬ್ಬ
ದರವೇಸಿ, ಬಿಟ್ಟರೆ ಇಲ್ಲಿ ಮತ್ತೇನೂ ಇಲ್ಲ. ಇಲ್ಲಿ ಯಾವ ಅಚ್ಚರಿಗಳು ನಡೆಯುವುದೇ ಇಲ್ಲ ಎನ್ನುವುದೇ
ಅಚ್ಚರಿ. ಕುಲದ ನೆಲೆಗಾಗಿ ನೊಂದುಕೊಳ್ಳದ ನಮ್ಮ ಸೂಫಿಗಳೇ ಅಚ್ಚರಿ. ಮನೆ ಕಟ್ಟಲಿಲ್ಲ, ಮಡದಿ ಮಕ್ಕಳನ್ನು
ಮೋಹಿಸಿ ಸಂಸಾರದೊಳಗಿದ್ದೂ ಸುಳ್ಳಿಗೆ ಸೆಣಸಾಡಲಿಲ್ಲ.
ನನಗೆ
ಹೊಸ ವರ್ಷದ ಹೊಸ್ತಿಲಲ್ಲಿ ಶಿಶುನಾಳಕ್ಕೆ ಹೋಗಿ ಬಂದದ್ದು ಹಿತವೆನಿಸಿದೆ.
ಇನ್ನೂ
ಎರಡು ವಾರ ಉರುಳಿರಲಿಲ್ಲ, ಮಾನಸಿಕವಾಗಿ ನರಳಾಡುತ್ತಿದ್ದ ನನಗೆ ಈ ಸಾರಿ ಮತ್ತೆ ಹೈದರಾಬಾದ ಕರ್ನಾಟಕಕ್ಕೆ
ಕರೆಯಿಸಿಕೊಂಡದ್ದು ಬಸವಣ್ಣ. ಈಗ ನಾನು ಹೋಗಬೇಕಾದದ್ದು ಚಿತ್ರದುರ್ಗದ ಮುರುಘಶರಣರು ಹಮ್ಮಿಕೊಂಡ ಎರಡು
ದಿನಗಳ ಶರಣಮೇಳಕ್ಕೆ. ನನ್ನ ವಾಸಸ್ಥಳ ಬೇಲೂರಿನಿಂದ ನಾನು ಹೊರಟು ನಿಂತ ಮಾನ್ವಿ ಸುಮಾರು 450 ಕಿ.ಮಿ
ದಾರಿ. 18 ರ ಮಧ್ಯಾಹ್ನ 12 ಗಂಟೆಗೆ ಹೊರಟ ನನಗೆ, ಸ್ವಾಸ್ಥ್ಯವಿಲ್ಲದ ಮನಸ್ಸಿಗೆ ಇನ್ನೂ ಡ್ರೈವಿಂಗ
ಸಾಧ್ಯವಿಲ್ಲ ಎನಿಸಿ ಸಿರಗುಪ್ಪಿಯ ಯಾವುದೋ ಲಾಡ್ಜನಲ್ಲಿ ನಿದ್ದೆ ಇಲ್ಲದ ರಾತ್ರಿ ಉರುಳಿಸಿದೆ. ಬೆಳಗಾದರೆ
ಮಸ್ಕಿಯ ಅಶೋಕನ ಶಾಸನ ಸೆಳೆಯುತ್ತಿತ್ತು. ಈ ಶಾಸನದಲ್ಲೊಂದು ಹೇಳಿಕೆ ಇದೆ. ಉಚ್ಚರಿಗೆ, ಕುಲೀನರಿಗೆ
ಇರುವ ದೇವರು ನೀಚರಿಗೂ ಬಡವರಿಗೂ ಇದ್ದಾನೆ ಎಂಬ ಭರವಸೆ ಇದೆ. ಇಲ್ಲಿಂದ ಹೊರಟು ಮಾನ್ವಿಯನ್ನು ತಲುಪಿದಾಗ
ಸಾಯಂಕಾಲದ 6 ಗಂಟೆ, ಆನಂತರದ್ದೆಲ್ಲವೂ ಅನುಭವ ಮಂಟಪ. ಆ ಪ್ರಮಾಣದಲ್ಲಿ, ಸುಮಾರು 1500 ಜನ ಸಂಖ್ಯೆಯ
ಮಧ್ಯದಲ್ಲಿ, ಅಪಾರ ಸಂಖ್ಯೆಯ ಹಿಂದೂ ಮುಸ್ಲಿಂರ ಸಾಮರಸ್ಯದಲ್ಲಿ ಬಸವ ಚಿಂತನೆಯನ್ನು ನೋಡಿದ್ದು ನನ್ನ
ಜೀವನದ ಅತ್ಯಂತ ರೋಮಾಂಚನಕಾರಿ ಅನುಭವ. ಆದರೆ ಈ ನನ್ನ ಅನುಭವ ಸಂಪೂರ್ಣವಾಗಲಿಲ್ಲ ಕಾರಣ ನನ್ನೊಂದಿಗೆ
ನನ್ನ ಇಷ್ಟದ ಎಲ್ಲ ಜೀವಗಳೂ ಇರಲಿಲ್ಲ.
ಬದುಕಿನ
ದುರ್ವಿದಿ ಎಂದರೆ ಇದೇ ಅಲ್ಲವೆ?
ಹಾದಿ
ಹಾದಿಗೂ ಬಿದ್ದಿರುವ, ಹಬ್ಬಿರುವ ಪ್ರೇಮದ, ಸಹನೆಯ, ಸಾಂತ್ವನದ ಹಾಗೂ ಭರವಸೆಯ ಹುಲ್ಲು ಸದಾ ಅಗ್ನಿಕುಂಡವಾದವರಿಗೆ
ಕಾಣುವುದೇ ಇಲ್ಲ.
ನಾನು
ನಂಬುವದಿಷ್ಟೆ ‘ಒಲವೆ ನಮ್ಮಯ ತಂದೆ ಎಲ್ಲ ಎಲ್ಲವೂ ಇಹುದು ಒಂದು ಪ್ರೀತಿಯ ಹಿಂದೆ’
No comments:
Post a Comment