Total Pageviews

Saturday, February 2, 2013

ಗಾಂಧಿ: ಏನೆಲ್ಲ ಬರೆದೂ, ಏನೂ ಬರೆಯಲಾಗಲಿಲ್ಲ...

ಗಾಂಧಿ: ಏನೆಲ್ಲ ಬರೆದೂ, ಏನೂ ಬರೆಯಲಾಗಲಿಲ್ಲ...                                                                     
ಲೋಕದಲ್ಲಿ ಸಾಮಾನ್ಯರಂತೆ ಹುಟ್ಟಿ ಸಾಯುವ ಶಿಶುಗಳಿಗೆ ನವಮಾಸಗಳ ಗರ್ಭ ಸಾಕಾಗಬಹುದು. ಆದರೆ ಸಾವಿಲ್ಲದವರ ಗರ್ಭದ ಕಥೆ ಹೀಗಲ್ಲ. ಗಾಂಧಿ(Gandhi) ಅಂಥ ಒಂದು ಸಾವಿಲ್ಲದ ಶಕ್ತಿ, ಸಾಮಾನ್ಯ ಮತ್ತು ಚಿಂತನೆಗಳ ಸಾಗರ. 1996, ಅಂದರೆ ಇಂದಿಗೆ 17 ವರ್ಷಗಳ ಹಿಂದೆ ದೆಹಲಿಯ ಗಾಂಧಿಯ ಸಮಾಧಿಗೆ ಭೇಟ್ಟಿ ಕೊಡುವುದರ ಮೂಲಕ ಈತನನ್ನು ನನ್ನೊಳಗೆ ಹೊಗಿಸಿಕೊಂಡ ನಾನು ಹೊತ್ತು ತಿರುಗಿದ್ದು, ಸಾವರಿಸಿಕೊಂಡದ್ದು, ಆತ ನನ್ನೊಳಗೆ ಬೆಳೆಯುವ ಪರಿಗೆ ಮತ್ತೆ ಮತ್ತೆ ನನ್ನನ್ನೇ ನಾನು ಮುಟ್ಟಿಕೊಂಡು ನೋಡಿದ್ದು ನಿಜಕ್ಕೂ ದೀರ್ಘ ಅವಧಿಯಲ್ಲವೆ? ಸಾಯುವ ಯಾವ ಸಂತಾನವು ನಮ್ಮೊಳಗೆ ಇಷ್ಟೊಂದು ಗಟ್ಟಿಯಾದ ಗರ್ಭವನ್ನು ಕಟ್ಟಿಕೊಳ್ಳುವುದಿಲ್ಲ. ಹೀಗೆ ನನ್ನೊಳಗೆ, ನನ್ನೊಂದಿಗೆ ಬೆಳೆದ ಗಾಂಧಿ ಹೊರ ಬರಲು ಪ್ರಾರಂಭಿಸಿದ್ದು 2002 ರಿಂದ. ಮೊದಲ ಬಾರಿಗೆ ಈತನನ್ನು ಕುರಿತು ‘ಗಾಂಧಿ ಮತ್ತು ಗೂಂಡಾ’ (Gandhi Mattu Gunda) ಎಂಬ ಸಣ್ಣ ನಾಟಕ ಬರೆದೆ. ಬರಿದಾಗಲಿಲ್ಲ ಒಳಗಿನ ಬೇಗುದಿ. ಮತ್ತೆ ಹೆಪ್ಪುಗಟ್ಟಲಾರಂಭಿಸಿದ. 2012 ರಲ್ಲಿ ನನ್ನೊಂದಿಗೆ ತನ್ನ ಅಂತಿಮ ದಿನಗಳ ನೋವುಗಳನ್ನು ತೋಡಿಕೊಳ್ಳುತ್ತ ‘ಗಾಂಧಿ: ಅಂತಿಮ ದಿನಗಳು’ ಬರಿಯಿಸಿಕೊಂಡ. ಈಗಲಾದರೂ ಹೆತ್ತು ಹಗುರಾಗಬೇಕಿತ್ತಲ್ಲ ನಾನು, ಹಾಗಾಗಲಿಲ್ಲ. ಹೆರುವ ಜೀವಕ್ಕೆ ನೋವಿನ ಕ್ಷಣದ ವೈರಾಗ್ಯವನ್ನು ಮರೆಯಲು ಅಣಿಯಾದರೆ ಮತ್ತೆ ಹೊಸ ಕನಸು, ಹೊಸ ಕೂಸು. ಈಗ ದಿನಾಂಕ 30/01/2013 ರಂದು ದಾವಣಗೆರೆಯ ಮಾನವ ಹಕ್ಕುಗಳ ವೇದಿಕೆ ಅಡಿಯಲ್ಲಿ, ಗ್ರೀನ್ ಆಸ್ಕರ್ (Green Oscar) ಪ್ರಶಸ್ತಿ ವಿಜೇತ ಧರ್ಮದಾಸ ಬಾರ್ಕಿ (Dharmadas Barki) ಮತ್ತು ಎಸ್.ಎಚ್.ಪಟೇಲರ (S.H.Patel) ಅಭಿಮಾನಿ ವಲಯದಲ್ಲಿ ನನ್ನಿಂದ ಮತ್ತೆ ಈ ಲೋಕಕ್ಕೆ ‘ಗಾಂಧಿ: ಮುಗಿಯದ ಅಧ್ಯಾಯ’ವಾಗಿ ಬಂದ. ಹೀಗೆ 1996 ರಿಂದ ಈ ಗಾಂಧಿಯನ್ನು ನಾನೊಬ್ಬನೇ ಹೊತ್ತು ತಿರುಗಿದೆನೆ? ಹಾಗೊಂದು ವೇಳೆ ಹೇಳಿದರೆ ಮಹಾ ಸುಳ್ಳು. ಸತ್ಯಾನ್ವೇಷಕನಿಗೆ ಸಲ್ಲಿಸುವ ಅಗೌರವ. ಈ ಒಟ್ಟು ಹೆರಿಗೆಯ ಸುತ್ತಲೂ ಕಣ್ವ (Kanva) ಪ್ರಕಾಶನದ ಗೆಳೆಯ ಎಮ್.ಆರ್.ಗಿರಿರಾಜು, ಲೇಖಕಿಯರಾದ ರಾಜೇಶ್ವರಿ.ಎನ್, ಪದ್ಮಶ್ರೀ, ಲೋಕಕ್ಕೆ ಬಂದ ಈ ಮಗುವನ್ನು ತಿದ್ದಿ ತೀಡಿದ ಅಪಾರ ಓದುಗ ಬಳಗ ಎಲ್ಲರೂ ನನ್ನೊಂದಿಗಿದ್ದರು ಎನ್ನುವುದು ಸಂಭ್ರಮದ ವಿಷಯವಲ್ಲವೆ? ಆದರೆ ಹೀಗೆ ಬಂದ ಈ ಒಟ್ಟು ಬರಹದ ಅಂತ್ಯದಲ್ಲಿ ನನಗನ್ನಿಸಿದ್ದು ಏನೆಲ್ಲ ಬರೆದೂ, ಏನೂ ಬರೆಯಲಾಗಲಿಲ್ಲ...
          ಆದರೆ ಹೀಗಂತ ನಾನೊಬ್ಬನೇ ಹೇಳುತ್ತಿಲ್ಲ. ನನ್ನೊಂದಿಗೆ ಈ ಗಾಂಧಿಯೂ ಹೇಳಿದ್ದಾನೆ. ಆತನ ಕೊನೆಯ ದಿನಗಳಿಗೆ ಸ್ವಲ್ಪ ಮುನ್ನ ಮಾರ್ಟಿನ್ ಕಿಂಗ್ಸ್ ಲೇ (Martin Kingsley)ಹಾಗೂ ವಿನ್ಸೆಂಟ್ ಶೀನ್‍ (Wincent Sheen )ರೊಂದಿಗೆ ಮೆಹರಾಲಿಯ ಖ್ವಾಜಾ ಸೈಯ್ಯದ್ ಕುತುಬುದ್ದಿನ್ ಭಕ್ತಿಯಾರ(Kutbuddin Bhaktiar)ರ ಉರಸ್‍ನಲ್ಲಿ ಪಾಲ್ಗೊಂಡಿದ್ದ ಗಾಂಧಿ ನನ್ನಂತೆಯೇ ರಾಗವೆಳೆದಿದ್ದ. `ಏನೆಲ್ಲ ಬರೆದು ಏನೂ ಬರೆಯಲಾಗಲಿಲ್ಲ...’. ಇದು ನಮ್ಮ ಮಿತಿ ಎನ್ನುವುದು ಎಷ್ಟು ಸತ್ಯವೋ, ಅಷ್ಟೇ ಸತ್ಯ ಕಾಲಧರ್ಮ. ಕೇವಲ ಒಂದು ಬತ್ತಳಿಕೆಯಂತೆ  ಬಳಕೆಯಾಗುವ ಮನುಷ್ಯ ಪ್ರಪಂಚದ ಅಗಾಧ ಉದ್ದೇಶ ಮತ್ತು ಗುರಿಗೆ ಸಾಧನವಷ್ಟೆ. ಎಲ್ಲ ನಡೆದು, ನುಡಿದು ಕಾಲದ ಅಣತಿಯಂತೆ ಹೊರಡಬೇಕಾದ ನಾವು, ನೀವು ಮತ್ತು ಈ ಗಾಂಧಿ ಇನೆಷ್ಟು ಹೇಳಬಹುದು? ನಮ್ಮ ಗರ್ವಕ್ಕೆ ಧಕ್ಕೆಯಾಗದಿರಲೆನ್ನುವ ಕಾರಣಕ್ಕೆ ಬೆಂಜಮಿನ್ ಡಿಸ್ರೆಲಿಯಂತೆ ನುಡಿಯಬಹುದಷ್ಟೇ, ಎಲ್ಲ ಬರೆದು ಆತ ಕೊನೆಗೆ ಹೇಳಿದ, The time will come, when you will hear me.”  
ಆ ಕಾಲ ಈಗ ಬಂದಿದೆಯೇ? ಬಂದಿದೆ ಎನ್ನುವ ಭ್ರಮೆಯಲ್ಲಿ ನಾನು ಗಾಂಧಿಯನ್ನು ಮತ್ತೇ ನಿಮ್ಮ ಮುಂದೆ ನಿಲ್ಲಿಸಿದ್ದೇನೆ. ಬಂದಿದೆಯೋ ಇಲ್ಲವೋ ಆದರೆ ಕೆಲವು ಭ್ರಮೆಗಳೊಂದಿಗೆ ಬದುಕಿದಾಗ ಸಿಗುವ ಆತ್ಮಸ್ಥೈರ್ಯ ಬದುಕಿನಿಂದಲೂ ಸಿಗುವುದಿಲ್ಲ. ಅಂತಹ ಮಾಯಾವಿ ಈ ಗಾಂಧಿ ನನ್ನ ಪಾಲಿಗೆ ನನ್ನಂತಹ ಅನೇಕರ ಪಾಲಿಗೆ. ಈ ಗಾಂಧಿ ಯಾರು? ಏನು? ಹೇಗೆ? ಎಂದು ಎಷ್ಟೆಲ್ಲಾ ಜನ ಬರೆದಿದ್ದಾರೆ ಆದರೆ ನನಗೆ ಮಾತ್ರ ಸ್ಟೆಫೆರ್ಡ್ ಕ್ರಿಪ್ಸ್‍ನ ಮಾತುಗಳಲ್ಲಿಯೇ ಗಾಂಧಿ, ಗಾಂಧಿಯಾಗಿ ಕಾಣಿಸುತ್ತಾನೆ, I know of no other man in our time, or indeed in recent history, who so convincingly demonstrated the power of the spirit over material things”. ಹೆಸರಾಂತ ಇತಿಹಾಸಕಾರ ವಿಲ್ ಡ್ಯೂರಾಂಟ್‍(Wil Durant)ನು ಇದನ್ನೇ ಹೇಳಿದ, ‘ಗಾಂಧಿ ತಾವು ಸಾಧಿಸಬೇಕಾದುದನ್ನು ತಮ್ಮ ಸಾವಿನಲ್ಲಿ ಸಾಧಿಸಿದ್ದಾರೆ. ಉಳಿದವರು ಮಾಡಬೇಕಾದುದು ಸಾಕಷ್ಟಿದೆ.’
ಈ ಉಳಿದವರ ಸಾಲಿನಲ್ಲಿ ಬರುತ್ತೇವೆ ನಾವು, ನೀವು ಹಾಗೂ ಇಡೀ ಪ್ರಪಂಚ. ನೆಹರೂ(Nehru), ಚರ್ಚಿಲ್(Charchil), ಹಾಗೂ ಮನಮೋಹನ್ ಸಿಂಗ್(Manmohan Singh). ನಾವೆಲ್ಲಾ ಗಾಂಧಿಯ ಹೆಸರನ್ನು ನೆಪವಾಗಿಸಿಕೊಳ್ಳಲು ಸೋತವರು ಎಂದು ಕೆಲವೊಮ್ಮೆ ನನಗನಿಸಿದೆ. ಚರ್ಚಿಲ್‍ನ ಇಡೀ ಬದುಕಂತೂ ಗಾಂಧಿಯ ಟೀಕೆಯಲ್ಲಿಯೇ ಕರಗಿಹೋಯಿತು. ಆತ ಎಸೆದ ಒಂದೊಂದು ಟೀಕೆಯ ಕಲ್ಲನ್ನು ಮೆಟ್ಟಿಲಾಗಿಸಿಕೊಂಡು ಮೇಲೆರಿದವನು ಈ ಮುದುಕ. ಈತ ಮಹಾತ್ಮ(Mahatma)ನಾಗಿ ಪ್ರಪಂಚದಲ್ಲಿ ಉಳಿದ, ಚರ್ಚಿಲ್ ಮನುಷ್ಯನಾಗಿ ಪ್ರಪಂಚದಿಂದ ಅಳಿದ. ವಿಚಿತ್ರ ನೋಡಿ, ಮಹಾತ್ಮನನ್ನು ಬೈಯ್ದೂ ಇತಿಹಾಸದ ಅವಿಭಾಜ್ಯ ಅಂಗವಾಗಿ ಉಳಿಯುವ ಸುದೈವಿ(?) ಚರ್ಚಿಲ್. ಇವನಷ್ಟೇ ಭಾಗ್ಯಶಾಲಿ(?) ಆ ಗೋಡ್ಸೆ. ಈ ಭಾಗ್ಯ ನಿಮಗಿದೆಯೋ? ನನಗಂತೂ ದಕ್ಕಿದೆ. ಈತನ ಕುರಿತು `ಗಾಂಧಿ ಮತ್ತು ಗೂಂಡಾ’, ` ಗಾಂಧಿ: ಅಂತಿಮ ದಿನಗಳು’ ಮತ್ತು ` ಗಾಂಧಿ: ಮುಗಿಯದ ಅಧ್ಯಾಯ’ ಹೀಗೆ ಏನೆಲ್ಲಾ ಬರೆದಿದ್ದೇನೆ. ಮುದುಕನನ್ನು ಕುರಿತು ಬರೆದು ಮುಪ್ಪನ್ನು ಆಹ್ವಾನಿಸಿಕೊಂಡ ಮೂರ್ಖ ಎನ್ನುವ ಟೀಕೆಗೂ ಒಳಗಾಗಿರಬಹುದು. ಈ ಟೀಕೆಯಲ್ಲಿಯೇ ನನ್ನ ಪುನರುತ್ಥಾನವಿದೆ. ಕಬೀರ(Kabeer), ಅಕ್ಕಮಹಾದೇವಿ, ಗಾಂಧಿ, ಒಶೋ(Osho), ಅಬ್ಬಾಸ್(Abbas), ಅಂಬೇಡ್ಕರ(Ambedkar)ರನ್ನು ಕುರಿತು ಬರೆದು ನಾನು ಮುಪ್ಪಿನವರ ಸಾಲಿನಲ್ಲಿ ಸೇರುವುದಾದರೆ ಈ ದೇಶಕ್ಕೆ ಇವರ ಆಲೋಚನೆಗಳು, ಪ್ರಯೋಗಗಳು ಅರ್ಥವಾಗಲಿಲ್ಲ ಎಂದು ದುಖಃ ಪಡುತ್ತೇನೆಯೇ ವಿನಃ ನನಗೆ ಮುದುಕರ ಪಟ್ಟ ಬಂದಿತೆಂದಲ್ಲ. ಅಷ್ಟಾಗಿಯೂ ಅದು ಬರುವುದಾದರೆ ಅವಿವೇಕದ ಯವ್ವೌನಕ್ಕಿಂತ ವಿವೇಕದ ಈ ಮುದುಕರ ಸಂಘವೇ ಒಳಿತೆಂದು ಸಂಭ್ರಮಿಸುತ್ತೇನೆ. ಗಾಂಧಿಯ ಕುರಿತು ಈ ನನ್ನ ಬರಹ ಏನು ಎನ್ನುವುದನ್ನು ಚರ್ಚಿಲ್‍ನ ಮಾತುಗಳಲ್ಲಿಯೇ ಹೇಳುತ್ತೇನೆ, This is not the end. It is not even the beginning of the end. But it is, perhaps, the end of the beginning” ಎರಡು ದಶಕಗಳ ಬಾಳಿನಲ್ಲಿ ಗಾಂಧಿಯನ್ನು ಕುರಿತು ಸಾಕಷ್ಟು ತಲೆಕೆಡಿಸಿಕೊಂಡಿದ್ದೇನೆ ಎನ್ನುವುದು ಸುಖದ ಮಾತಾಗಿದೆಯೇ? ಗೊತ್ತಿಲ್ಲ. ಪ್ರಾಥಮಿಕ ಶಾಲಾ ವಿಧ್ಯಾರ್ಥಿಯಾಗಿ ಈತನ ಜಯಂತಿಯ ಸಿಹಿಯನ್ನು, ಈತನ ಪುಣ್ಯತಿಥಿಯ ಮಧ್ಯಾನ್ಹದ ಊಟವನ್ನು ಅನುಭವಿಸಿದ ನನಗೆ ಕಾಡಿದ್ದು ಒಂದೇ ಪ್ರಶ್ನೆ, ನಮ್ಮ ಮಧ್ಯದ ಈ ಗಾಂಧಿ ಯಾಕೆ ಒಗಟಿನಂತಾದ? ಕೇತಲದೇವಿ, ನೀವು ಈ ಹೆಸರನ್ನು ಕೇಳಿರಬಹುದು. ಆಕೆಯ ಒಂದು ವಚನದ ಆರಂಭಿಕ ಎರಡು ಸಾಲುಗಳು-
` ಹದ ಮಣ್ಣಲ್ಲದ ಮಡಿಕೆಯಾಗಲಾರದು
ವೃತಹೀನನ ಬೆರೆಯಲಾಗದು’
ಎಷ್ಟೊಂದು ಸರಳ ಈ ಸಾಲುಗಳು. ಆದರೆ ವಾಸ್ತವದಲ್ಲಿ ಎಷ್ಟೊಂದು ಕಠಿಣ ಇದರ ಸಾಧನೆ. ಒಬ್ಬ ಗಾಂಧಿಯ ಸೋಲು-ಗೆಲುವು ಎಲ್ಲ ನಿರ್ಭರವಾಗುವುದು ಈ ಸಾಲುಗಳನ್ನಾಧರಿಸಿಯೇ. ಕೇತಲದೇವಿಯ ಈ ಸಾಲುಗಳು ಗಾಂಧಿಯ ಅಂತಿಮ ದಿನಗಳಿಗೆ ಹೊಂದಿಸುವಷ್ಟು ಇನ್ಯಾರ ಸಾಲುಗಳನ್ನು ಹೊಂದಿಸಲಾಗದು. ಕನಿಷ್ಟ ಆತನ ಎರಡು ವರ್ಷದ ಅಂತಿಮ ಬದುಕು ಪಶ್ಚಾತಾಪದ ಕಣ್ಣೀರಿನಲ್ಲಿ ಮಿಂದೆದ್ದಿದೆ. ಅಹಿಂಸೆ, ಸತ್ಯಾಗ್ರಹ, ಖಾದಿ, ಚರಕ, ಗ್ರಾಮ ಸ್ವರಾಜ್ಯ, ರಾಮರಾಜ್ಯ ಎಲ್ಲವೂ ತನ್ನೊಂದಿಗೆ ಅಳಿಯುತ್ತಿವೆ ಎನ್ನುವ ವಾಸ್ತವ ಅವನ ಅರಿವಿಗೆ ಬಂದಿದೆ. ಹದವಲ್ಲದ ಮಣ್ಣು ಮಡಿಕೆಗೆ ಬಾರದಂತೆ, ವೃತಹೀನರ ಸಂಗ ಸಾತ್ವಿಕ ಶಕ್ತಿಯಾಗದಂತೆ ಗಾಂಧಿಯ ಪಾಡಾಗಿದೆ. ಹೀಗೆ ಹೇಳುವಾಗ ಗಾಂಧಿಯನ್ನು ಮಹಾತ್ಮನನ್ನಾಗಿ ನೋಡಬೇಕಿಲ್ಲ. ಮನುಷ್ಯನಾಗಿಯೂ ಅವನ ಹೂಡಿಕೆ ತಪ್ಪಾಗಿದೆ. ಯಾಕೆಂದರೆ, Among people generally corrupt, liberty cannot long exist.” ಗಾಂಧಿ, ಸತ್ಯಸಂಧರಾಗಿರಬೇಕು, ಆತ್ಮಸಾಕ್ಷಿಯಿಂದ ಬದುಕಬೇಕು ಎನ್ನುವುದರ ಅರ್ಥ ನಮ್ಮನೆಲ್ಲಾ  ಹಿಮಾಲಯಕ್ಕೆ ಕರೆದುಕೊಂಡು ಹೋಗಿ ಬೈರಾಗಿಗಳನ್ನು ಮಾಡುವುದು ಎಂದಲ್ಲ. ಬದಲಿಗೆ ನಾವು ನಂಬಿದ ಲೌಕಿಕ ವ್ಯವಸ್ಥೆಗಳಿಗೂ ಒಂದು ಸಿದ್ಧಾಂತ ಬೇಕಾಗುತ್ತದೆ ಎನ್ನುವ ಸರಳ ಸತ್ಯ ಹೇಳುವುದರಲ್ಲಿಯೇ ಅವನ ಇಡೀ ಜೀವನ ಕಳೆದುಹೋಯಿತು ಎನ್ನುವುದು ಅತ್ಯಂತ ಖೇದದ ಸಂಗತಿ. ವ್ಯಕ್ತಿಗತವಾಗಿ ಕಳೆದುಕೊಂಡ ಮೌಲ್ಯಗಳನ್ನು, ತತ್ವಗಳನ್ನು ಯಾವುದೋ ಸರಕಾರ, ಇನ್ನಾವುದೋ ಮಹಾತ್ಮ ತನಗೆ ತಂದುಕೊಡಲಿ ಎಂದು ಬಯಸುವ ಸ್ಥಿತಿ ಇದೆಯಲ್ಲಾ, ಅದು ಅಧಃಪತನದ ಕೊನೆಯ ಹಂತ. ಕೋಮು-ಗಲಭೆ, ಧಾರ್ಮಿಕ ಅಸಹಿಷ್ಣುತೆ, ಬ್ರಷ್ಟಾಚಾರದ ಭಾರತದಲ್ಲಿ ಎಚ್ಚರವಾಗಿ, ಸಾಮಾನ್ಯ ಪ್ರಜೆಯಾಗಿ ಗಾಂಧಿ ಇಂಥ ಸಂದೇಶವನ್ನು ಕೊಡುತ್ತಿದ್ದನಲ್ಲ, ಅದು ಆತನ ದುರಂತ.
ಗಾಂಧಿಯನ್ನು ಯಾರೂ ಮೋಸಮಾಡಬಹುದಾಗಿತ್ತು. ಇದರಿಂದ ಗಾಂಧಿಗೆ ಯಾವ ಹಾನಿಯೂ ಇಲ್ಲ. ಅದೇ ಆತನ ಸೌಂದರ್ಯ, ಶಕ್ತಿ ಮತ್ತು ಸಾಧನೆ. ಆದರೆ ಮೋಸದ ನಮ್ಮ-ನಿಮ್ಮ ಗತಿಯೇನು? ಈ ಸಮಾಜದ ಭವಿಷ್ಯವೇನು? ನಾನು ಗಮನಿಸಿದಂತೆ ಈ ದೇಶ, ಜನಗಳ ಬಗೆಗಿದ್ದ ಮೋಹನದಾಸನೆಂಬ ಸಾಮಾನ್ಯ ವ್ಯಕ್ತಿಯ ಮೋಹಗಳನ್ನೇ ಬಳಸಿಕೊಂಡು ಆತನನ್ನು ಹೇಗೆಲ್ಲಾ ಎಳೆಯಲಾಯಿತು, ಆತನ ಎಲ್ಲ ಆಲೋಚನೆಗಳಿಗೆ, ಕನಸುಗಳಿಗೆ ವಿರುದ್ಧವಾದ ಘಟನೆಗಳಿಗೆ ಆತನನ್ನೇ ಸಾಕ್ಷಿಯಾಗಿಸಲಾಯಿತು, ಸಾಲದಕ್ಕೆ ನಮ್ಮ ರಾಜಕೀಯ ಅಪರಾಧಕ್ಕೆ ಆತನನ್ನು ಕೊಲೆ ಮಾಡಿ ಆತ ಜೀವಮಾನದುದ್ದಕ್ಕೂ ವಿರೋಧಿಸಿದ್ದ ವ್ಯಕ್ತಿಪೂಜೆಯನ್ನು ಸ್ಥಾಪಿಸಲಾಯಿತು. ಅಂತಿಮವಾಗಿ `ಗಾಂಧಿ’ ಎಂಬ ಈ ಮನುಷ್ಯನಿಂದ ಒಟ್ಟು ಇತಿಹಾಸದಲ್ಲಿ ಏನಾಯಿತು ಎಂದು ನೀವು ಕೇಳಿದರೆ ನನಗೆ ಫ್ರಾನ್ಸಿಸ್ ಬೇಕನ್(Fransis Becon) ನೆನೆಪಾಗುತ್ತಾನೆ. ಆತ ಬರೆಯುತ್ತಾನೆ, It is as hard and severe a thing to be a true politician as to be truly moral. ಗಾಂಧಿ ಒಬ್ಬ ಸತ್ಯಸಂಧನಾಗಿದ್ದಕಾಗಿ ಮತ್ತು ತತ್ವಾಧಾರಿತ ರಾಜಕಾರಣಿಯಾಗಿ ಮಾಡಿದ ಪ್ರಯತ್ನಕ್ಕಾಗಿ ಆಗಬೇಕಾದುದೇ ಆಗಿದೆ ಎಂದು ನೀವು ಆತ್ಮಸಾಕ್ಷಿಯಾಗಿ ಒಪ್ಪುವುದಾದರೆ ನಾನೂ ನಿಮ್ಮೊಂದಿಗಿರುತ್ತೇನೆ ಮತ್ತು ವರ್ತಮಾನದ ಎಲ್ಲ ದುರಂತಗಳಿಗೂ ಬೆಲೆ ತೆರುತ್ತೇನೆ.
ಕೊನೆಯದಾಗಿ, ನನಗೀಗ ಆ ಅಜ್ಜಿ ನೆನಪಾಗುತ್ತಾಳೆ, ಈಕೆಯ ನೆರಳಿನಲ್ಲಿ ನನ್ನ ಎರಡು ದಶಕಗಳ ಬಾಲ್ಯ ಕಳೆಯುತು. ಮಹಾ ಬಿಗುಮಾನದ ಮುದುಕಿ. ಆಕೆಗೆ ಗಾಂಧಿಯ ಹುಟ್ಟುಹಬ್ಬ ಮತ್ತು ಹುತಾತ್ಮರ ದಿನ ಗೊತ್ತಿರಲಿಲ್ಲ. ಆದರೆ ಗಾಂಧಿ ಗೊತ್ತಿದ್ದ. ಹೀಗಾಗಿಯೇ ಜೀವನದ ಕೊನೆಯವರೆಗೂ ಆಕೆ ಗಾಂಧಿಯ ಚರಕ ಬಿಡಲಿಲ್ಲ. ಆಕೆಯ ನೆನಪು ಬಂದಾಗಲೆಲ್ಲಾ ನನಗೆ ಕದಿರ ರೆಮ್ಮವ್ವೆ ಎಂಬ ಶರಣೆಯ ಸಾಲುಗಳು ನೆನಪಾಗುತ್ತವೆ. ಆಕೆಯ ಹೆಸರೇ ಕದಿರ ರೆಮ್ಮವ್ವೆ. ಆಕೆಗೂ ಚರಕಕ್ಕೂ ಅವಿನಾಭಾವ ಸಂಬಂಧ ಎಂದು ಬಿಡಿಸೇನೂ ಹೇಳಬೇಕಾಗಿಲ್ಲ. ಆದರೆ ಚರಕದೊಂದಿಗಿನ ಆಕೆಯ ಸಂಬಂಧ ಎಂತಹದ್ದು ಎನ್ನುವುದನ್ನು ನಿಮಗೆ ನಾನು ತಿಳಿಸಲೇಬೇಕು. ಯಾಕೆಂದರೆ ಈ ಕದಿರ ರೆಮ್ಮವ್ವೆಯ ಸಾಲುಗಳೆಂದರೆ ಗಾಂಧಿಯ ಚರಕದ ಸುತ್ತಲಿನ ಒಟ್ಟು ಆಲೋಚನೆ. ಅಥವಾ ನಾನು ಮೇಲೆ ಸೂಚಿಸಿದ ಮಹಿಳೆಯ ಒಟ್ಟು ಬದುಕು. ಆಕೆ ಬರೆಯುತ್ತಾಳೆ-
“ನಾ ತಿರುಹುವ ರಾಟಿಯ ಕುಲ ಜಾತಿಯ ಕೇಳಿರಕ್ಕ
ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು
ನಿಂದ ಬೊಂಬೆ ಮಹಾರುದ್ರ... ... ... ಹೀಗೆ ಏನೆಲ್ಲಾ.
ಒಟ್ಟಾರೆ ಚರಕ ಅಲ್ಲಿ ವ್ಯಾಪಾರವಲ್ಲ. ಗಾಂಧಿಯೂ ಇದನ್ನೇ ಹೇಳುತ್ತಿದ್ದ. ನಮ್ಮೊಳಗಿನ ಶಾಂತಿಗೆ ಆ ಮೂಲಕ ನಾಡಿನ ನೆಮ್ಮದಿಗೆ ದೇಶದ ಪ್ರಗತಿಗೆ ಸಂಕೇತವಾಗಿದ್ದ ಚರಕ ರಾಷ್ಟ್ರದ್ವಜದ ಭಾಗವಾಗಬೇಕು ಎಂದು ಬಯಸಿದ್ದ. ಗಾಂಧಿಗೆ ಗೊತ್ತಾಗದಂತೆ ಇನ್ನಿಲ್ಲದಂತಾಗಿ ಹಿಂಸೆಯ ಸಂಕೇತವಾದ ಅಶೋಕ ಚಕ್ರ ಅಲ್ಲಿ ಸೇರಿಕೊಂಡಿರುವುದು ಆತನ ಕನಿಷ್ಟ ಅಪೇಕ್ಷೆಯನ್ನು ತಿರಸ್ಕರಿಸಿದ್ದಕ್ಕೆ ಸಾಕ್ಷಿ. ಈಗ ಗಾಂಧಿ ಕುರಿತು ಗೋಡ್ಸೆ ಹೇಳಿದ್ದು ಸರಿ ಎನಿಸುತ್ತದೆ. ಆತ ಹೇಳುತ್ತಾನೆ, “ 33 ವರ್ಷಗಳ ಗಾಂಧೀಜಿಯ ರಾಜಕೀಯ ಜೀವನದಲ್ಲಿ ಅವರಿಗೆ ಒಂದೇ ಒಂದು ಸಣ್ಣ ವಿಜಯವೂ ಸಿಕ್ಕಿರಲಿಲ್ಲ.” ಆದರೆ ಇದೆಲ್ಲವೂ ಒಂದು ಹಂತಕ್ಕೆ ನಡೆದುಹೋಗುತ್ತದೆ. ಗಾಂಧಿ ಒಂದು ವಿಚಿತ್ರ ಪ್ರಜ್ಞೆಯಾಗಿ ನಮ್ಮನ್ನು ಬೇಟೆಯಾಡುತ್ತಾನೆ. ಈ ಕಾರಣಕ್ಕಾಗಿ ನಾನು ಬರೆಯುತ್ತೇನೆ, ನೀವು ತಲೆಕೆಡಿಸಿಕೊಳ್ಳುತ್ತೀರಿ. ಆತ ಮುಗಿಯದ ಅಧ್ಯಾಯವಾಗಿ ಮುಂದುವರೆಯುತ್ತಾನೆ.


No comments:

Post a Comment