ಗಾಂಧಿ:
ಸಂಸ್ಕಾರವಂತರಿಗೆ ಮಾತ್ರ
ಇಂಥ
ಒಂದು ಸಮಯಕ್ಕಾಗಿ ನಾನು ಹರಕೆಯೇನು ಹೊತ್ತಿರಲಿಲ್ಲ. ಆದರೆ ನನ್ನ ಹೆರಲು ಹರಕೆ ಹೊತ್ತ ನನ್ನ ತಂದೆ-ತಾಯಿಗಳಿಗೂ
ತಮ್ಮ ಬಾಳಿನ ಮುಸ್ಸಂಜೆಯ ಎಪ್ಪತ್ಮೂರರ ವಯಸ್ಸಿನಲ್ಲಿ ಹೀಗೆ ನಡೆಯುತ್ತದೆ ಎಂದು ಅವರೂ ಊಹಿಸಿರಲಿಲ್ಲ.
ಇದೊಂದು ಭಾವ ವಿಭೋರತೆಯ ಕ್ಷಣ. ಸಾಧ್ಯವಾಗಿಸಿದವರು ದಾವಣಗೆರೆಯ ಮಾನವ ಹಕ್ಕುಗಳ ವೇದಿಕೆಯ ಅಧ್ಯಕ್ಷರೂ,
ಕರ್ನಾಟಕದ ಅಪರೂಪದ ಮುಖ್ಯಮಂತ್ರಿ ಜೆ.ಎಚ್.ಪಟೇಲರ ಸಹೋದರರೂ ಆದ ಶ್ರೀ ಎಸ್.ಎಚ್.ಪಟೇಲರು. ಮಂದಹಾಸ
ಬೀರುತ್ತ, ಬಂದವರೆಲ್ಲರನ್ನೂ ಬಂಧುಗಳೆಂದು ಅಪ್ಪಿಕೊಳ್ಳುತ್ತ, ಬಂದುದೆಲ್ಲವನ್ನೂ ಭಾಗ್ಯವೆಂದೇ ಒಪ್ಪಿಕೊಳ್ಳುತ್ತ,
ನಾಡಿನುದ್ದಕ್ಕೂ ಕಲಾವಿದರ, ಬರಹಗಾರರ, ರಾಜಕಾರಣಿಗಳ ಮತ್ತು ಧರ್ಮ ಗುರುಗಳ ದೊಡ್ಡ ಸಂಸಾರ ಕಟ್ಟಿಕೊಂಡವರು
ಈ ಪಟೇಲರು. ಇವರ ಕುರಿತು ಒಂದೇ ಮಾತು, ಭಾವನೆಗಳು ಒಳ್ಳೆಯವಾದರೆ ಭಗವಂತನೂ ಮನೆಯಲ್ಲಿ ಕಸಗುಡಿಸಿಕೊಂಡು
ಇರುತ್ತಾನೆ. ಮಡದಿ, ಮಕ್ಕಳು, ಮೊಮ್ಮಕ್ಕಳೊಂದಿಗೆ ಜಾತಿಯ ಹಂಗು ಹರಿದು ಯಾರೆಲ್ಲರನ್ನೂ ಸೇರಿಸಿಕೊಂಡು
ಸಂಭ್ರಮಿಸುವ ಇವರ ವಾತ್ಸಲ್ಯಪೂರ್ಣ ಆತಿಥ್ಯವನ್ನು ಸ್ವಿಕರಿಸುವದಕ್ಕಾದರೂ ನಾವು ಏನಾದೊರೊಂದಾಗಿರಬೇಕು.
2012 ಅಕ್ಟೋಬರ 2 ರಂದು ನನ್ನ ‘ಗಾಂಧಿ:ಅಂತಿಮ ದಿನಗಳು’ ಬಿಡುಗಡೆ ಮಾಡಿಸಿ ಸಂಭ್ರಮಿಸಬೇಕೆಂದುಕೊಂಡಿದ್ದ
ಇವರೊಂದಿಗೆ ನನಗೆ ಬೆರೆಯಲಾಗಲಿಲ್ಲ. ಕಾರಣವಿಷ್ಟೆ, ಅಂದೇ ನನ್ನ ಆ ಕೃತಿಗೆ ಪ್ರಶಸ್ತಿ ಲಭಿಸಿ ನಾನು
ಅಲ್ಲಿಗೆ ಹೋಗಬೇಕಾಗಿದ್ದು.
ಅಂದಿನಿಂದ
ದಾವಣಗೆರೆಯ ಈ ಪ್ರೀತಿಯ ಜನತೆಗೆ ಏನಾದರೊಂದು ಅಚ್ಚರಿಯ ಉಡುಗೊರೆಯನ್ನು ಕೊಡಲು ಹಂಬಲಿಸಿದವನು ನಾನು.
ಅಂತೆಯೇ ಪಟ್ಟುಹಿಡಿದು ಕುಳಿತು ರಾಜೇಶ್ವರಿ, ಪದ್ಮಶ್ರೀ, ದೇಸಾಯಿ, ಗಿರಿರಾಜು ಮತ್ತು ಶಿವಪ್ರಸಾದ
ಇವರುಗಳ ಸಹಾಯದಿಂದ ನನ್ನ ‘ಗಾಂಧಿ:ಮುಗಿಯದ ಅಧ್ಯಾಯ’ವನ್ನು ಮುಗಿಸಿ ದಾವಣಗೆರೆಯ ಮಾನವ ಹಕ್ಕುಗಳ ವೇದಿಕೆ
ಹಮ್ಮಿಕೊಂಡ ಹುತಾತ್ಮರ ದಿನಾಚರಣೆಗೆ ಬಿಡುಗಡೆಗೊಳಿಸುವ ಯೋಚನೆಯನ್ನು ಕಾರ್ಯಗತಗೊಳಿಸಿದೆ.
ದ್ವೇಷ
ದ್ವೇಷವನ್ನೇ ಹೆಚ್ಚಿಸುವಂತೆ ಪ್ರೀತಿ ಪ್ರೀತಿಯನ್ನು ನೂರ್ಮಡಿಸುತ್ತದೆ ಎನ್ನುವುದಕ್ಕೆ ಸಾಕ್ಷಿ ದಿನಾಂಕ
30/01/2013 ರಂದು ನಡೆದ ಈ ಕಾರ್ಯಕ್ರಮ. ಪಟೇಲರ ಗೆಳೆಯರೂ ಮತ್ತು ವೇದಿಕೆಯ ಸಕ್ರೀಯ ಕಾರ್ಯದರ್ಶಿಗಳೂ
ಆದ ಅರುಣ್‍ಕುಮಾರ ಹಾಗೂ ಹನುಮಂತಪ್ಪರೊಂದಿಗೆ ಸೇರಿಕೊಂಡು ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಅದೆಷ್ಟು
ಅಚ್ಚರಿಗಳು ಕಾದಿದ್ದವೆನ್ನುವನ್ನು ನೀವು ಗಮನಿಸಬೇಕು. ನನ್ನ ಸಾವಿರಾರು ಸಮಾರಂಭಗಳಲ್ಲಿ ಕೆಲವೊಂದಕ್ಕೆ
ಮಾತ್ರ ನನ್ನ ತಂದೆ-ತಾಯಿ ಹಾಜರಿದ್ದಾರೆ. ಅಂಥ ಬೆರಳೆಣಿಕೆಯ ಸಮಾರಂಭಗಳಲ್ಲಿ ಇದೂ ಒಂದು. ಈ ಸಮಾರಂಭದಲ್ಲಿ
ಶಿಕ್ಷಣಕ್ಕೆ ಅವರು ಸಲ್ಲಿಸಿದ ಸೇವೆ ಮತ್ತು ಕರ್ನಾಟಕಕ್ಕೆ ನನ್ನನ್ನು ನೀಡಿದ್ದಕ್ಕಾಗಿ ಪ್ರಶಸ್ತಿಯನ್ನು
ನೀಡಿ ಸನ್ಮಾನಿಸಲಾದದ್ದು ಮತ್ತೊಂದು. ಕಳೆದ ಒಂದು ತಿಂಗಳಿನಿಂದ ಆಂತರಿಕ ಹಿಂಸೆಯ ಬೇಗುದಿಯಲ್ಲಿ ಬೆಂದಿದ್ದ
ನನ್ನೊಂದಿಗೆ ಅಂದು ಎಷ್ಟೊಂದು ಬೆಳಕಿನ ಜನಗಳು, ಎಷ್ಟೊಂದು ಪ್ರೀತಿಯ ಕಣಗಳು.
ತತ್ವಚಿಂತನೆಯಲ್ಲಿ
ಆಸಕ್ತರೂ, ದಾವಣಗೆರೆಯ ಸಧ್ಯದ ಜಿಲ್ಲಾಧಿಕಾರಿಗಳು ಆದ ಶ್ರೀ ಪಟ್ಟಣಶೆಟ್ಟಿ, ದೇಶ ದೇಶಗಳ ಮಧ್ಯ ಬೆಳಕಿನ,
ಪ್ರೇಮದ ದೀಪ ಹೊತ್ತಿಸಬೇಕೆನ್ನುವ ಹಂಬಲದ ಗ್ರೀನ್ ಆಸ್ಕರ ಪುರಸ್ಕೃತ ಶ್ರೀ ಧರ್ಮದಾಸ ಬಾರ್ಕಿ, ಇವರು
ಗಂಗೂಬಾಯಿ ಹಾನಗಲ್ಲರ ಮೊಮ್ಮಗ ಎನ್ನುವುದೊಂದು ಹೆಗ್ಗಳಿಕೆ, ಸದಾ ನನ್ನ ಏಳ್ಗೇಯನ್ನೆ ಬಯಸುವ ಗೆಳೆಯ
ಎಮ್.ಆರ್.ಗಿರಿರಾಜು, ನಿಗರ್ವದ, ಪ್ರಾಮಾಣಿಕತೆಯ ಪ್ರತಿಬಿಂಬದಂತಿರುವ ಹೆಸರಾಂತ ಚಿತ್ರ ಕಲಾವಿದ ಶ್ರೀ
ಬಿ,ಎಸ್.ದೇಸಾಯಿ, ಶಿವಮೊಗ್ಗದಿಂದ ಬಂದಿದ್ದ ನನ್ನ ದೊಡ್ಡಪ್ಪ ಶ್ರೀ ಶಿವಲಿಂಗಯ್ಯಾ ಗೊಂಬಿಗುಡ್ಡ, ತರಿಕೆರೆಯಿಂದ
ಬಂದ ಗೆಳೆಯ ಹರೀಶ ಎಷ್ಟೊಂದು ಪ್ರೀತಿ. ಆನಂತರ ಹಿರಿಯರಾದ ಪಟೇಲರ ಮನೆಯಲ್ಲಿ ನಡೆದ ಊಟದಲ್ಲಿ ಎಷ್ಟೊಂದು
ವೈವಿದ್ಯ ರೀತಿ, ನೀತಿ. ಇದು ಹೃದಯ ಸಂಸ್ಕಾರವಂತರಿಗೆ ಮಾತ್ರ ಅರ್ಥವಾಗುವ ಜೀವನದ ದಾರಿ. ಮಾಡಿದೆನೆಂಬುದು
ಮನದಲ್ಲಿಯೂ ಹೊಳೆಯಿಸಿಕೊಳ್ಳದ ಇವರ ಮನೆಯಲ್ಲಿ ನಿತ್ಯ ದಾಸೋಹ. ಮರೆಯಬೇಡಿ ಈ ಮನೆಯಲ್ಲಿ ಒಬ್ಬ ಪುಟ್ಟ
ಕವಿಯೂ ಇದ್ದಾನೆ, ಕುಮಾರ ಆದಿತ್ಯ ಪಟೇಲ. ಈತ ಪಟೇಲ ಮನೆತನದ ಭವಿಷ್ಯದ ಸಾಂಸ್ಕೃತಿಕ ರಾಯಭಾರಿ.

No comments:
Post a Comment