Total Pageviews

Monday, February 4, 2013

ಹದಾ ಇಲ್ದ ಪದಾ ಇಲ್ಲ


ಹದಾ ಇಲ್ದ ಪದಾ ಇಲ್ಲ

ಎರೆಯುವೆನು ಬಾ ನಿನ್ನ, ನಮ್ಮ ಪಟ್ಟದ ಮರಿಯೆ
ಸಕಲ ತೀರ್ಥದ ಕ್ಷೀರ ನೀರ ತಂದು


ಇವು ಕವಿ ಬೇಂದ್ರೆ ಮಧುರಚನ್ನ(Madhurachanna)ರನ್ನು ಹರಸಿ ಹಾಡಿದ ಸಾಲುಗಳು. ಹಾಗೆ ಬೇಂದ್ರೆ ಅನ್ಯರನ್ನು ಕುರಿತು ಬರೆದದ್ದು ಬಹಳ ಕಡಿಮೆ. ಈ ಬರೆಯುವ, ಬರೆಯಿಸಿಕೊಳ್ಳುವ ಜೀವಗಳಿಗೆ ಬರೀ ಮೈ ಒಂದಿದ್ದರಾಗದು, ಮನಸ್ಸು ಬೇಕು, ತಪಸ್ಸು ಬೇಕು ಎಲ್ಲಕ್ಕೂ ಮಿಗಿಲಾಗಿ ತಾಯ್ತನ ಬೇಕು. ಬದುಕೆಂದರೆ ಬರೀ ಶಬ್ದಗಳ ಜಾತ್ರೆ ಮತ್ತು ಮೈಯ ಮೆರವಣಿಗೆ ಎಂದುಕೊಂಡವರಿಗೆ ಈ ಸಾಲುಗಳ ಸುಖ ಗೊತ್ತಾಗುವುದಿಲ್ಲ. ಈ ಮೇಲಿನಂತೆ ಹಾಡುವ ಬೇಂದ್ರೆ(Bendre) ಈಗ ಗಂಡಲ್ಲ. ತಾಯಿ. ಕೂಸನ್ನು ಎದೆಗೇರಿಸಿಕೊಂಡು ಎರೆಯುವ ತಾಯಿ. ಮಧುರಚನ್ನರಲ್ಲೂ ಆ ಒಂದು ಮುಗ್ಧತೆಯ ಸೆಳಕು ಇರುವುದರಿಂದ ಅವರಿಗೆ ಬೇಂದ್ರೆಯನ್ನು ಸಂಪೂರ್ಣವಾಗಿ ಸಾಧ್ಯವಾಯಿತು. ಲೋಕ ವ್ಯವಹಾರವನ್ನೆ, ಉಸುರಿ ಉರಿಯುವ ಒಂದು ಪಾತ್ರವಾಗಿದ್ದರೆ ಇವರಿಬ್ಬರ ಮಧ್ಯ ಇಂಥ ಕಾವ್ಯಾನುಸಂಧಾನ ಸಾಧ್ಯವಿರಲಿಲ್ಲ.
ದಿನಾಂಕ 30 ರಂದು ದಾವಣಗೆರೆಯಲ್ಲಿ ಹುತಾತ್ಮರ ದಿನವನ್ನು ಆಚರಿಸಿ ಬಂದ ಮರುದಿನವೇ ದಿನಾಂಕ 31 ರಂದು ನಾನು(Dr.R.G.Mathapati) ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತ ಇಲಾಖೆ ಹಾಗೂ ಬೆಳ್ಳಿಮಂಡಲಗಳ ಸಹಯೋಗದಲ್ಲಿ ಬೇಂದ್ರೆ ಕಾವ್ಯ ಗಾಯನ ಹಾಗೂ ಜನ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಹಾಸನದ ಕಾರ್ಯಕ್ರಮದಲ್ಲಿ ‘ಬೇಂದ್ರೆ ನಾನು ಕಂಡಂತೆ’ ಎಂಬುದನ್ನು ಕುರಿತು ಮಾತನಾಡಿದೆ. ಅಂದು ನನ್ನೊಂದಿಗಿದ್ದವರು ಹೆಸರಾಂತ ಕವಿ ಶ್ರೀ ಬಿ.ಆರ್.ಲಕ್ಷ್ಮಣರಾವ್(B.R.LaxmanaRao), ಡಾ.ಜನಾರ್ಧನ, ಜಾವಗಲ್ ಪ್ರಸನ್ನ, ಶ್ರೀಮತಿ ಸುರೇಖಾ ಹೆಗಡೆ, ಟಿ.ವಿನೋದಚಂದ್ರ ಹಾಗೂ ಶ್ರೀ ರವಿ ನಾಕಲಗೂಡು.
ಮಾತುಗಾರ ಬೇಂದ್ರೆಗೆ ಮಾತು ವ್ಯಸನವಾಗಿರಲಿಲ್ಲ. ಮಾತು ಮಾತು ಮಥಿಸಿ ಕೆಲವೊಮ್ಮೆ ಅವರ ಜೀವನದಲ್ಲಿ ಮುಜುಗರದ ಸಂಧರ್ಬಗಳು ಉಂಟಾದದ್ದು ಯಾರಿಗೂ ಗೊತ್ತಿರದ ವಿಚಾರಗಳೇನಲ್ಲ. ಧಾರವಾಡದ ರೇಲ್ವೆ ಕ್ರಾಸಿಂಗ್ ಬಳಿ ಚಂಪಾ (Champa) ಮತ್ತು ಬೇಂದ್ರೆಯ ಮಧ್ಯ ನಡೆದ ಜಗಳ ಇಡೀ ನಾಡೇ ಸಾಯಂಕಾಲದ ಅವಲಕ್ಕಿ ತಿಂದಂತೆ ಚರ್ಚಿಸಿಯಾಗಿದೆ. ಕಾವ್ಯವನ್ನೂ ಇದು ಮಂತ್ರ, ಅರ್ಥ ಕೆಡಿಸಂದತೆ ಶಬ್ದಗಳ ಪೋಣಿಸುವ ತಂತ್ರ ಎಂದು ಸಾರಿದ ಬೇಂದ್ರೆಯವರ ಜಗಳದ ಅನೇಕ ಉದಾಹರಣೆಗಳನ್ನು ಅವರ ಸನ್ಮಿತ್ರರೂ, ನನ್ನ ಕಾವ್ಯ ದೀಕ್ಷಾ ಗುರುಗಳೂ ಆದ ಸಿಂಪಿ ಲಿಂಗಣ್ಣ(Simpi Linganna)ನವರು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ನಮ್ಮೂರಾದ ಚಡಚಣಕ್ಕೆ ಲಿಂಗಣ್ಣನವರನ್ನು ಹುಡಿಕಿಕೊಂಡು ಬೇಂದ್ರೆ ಬರುತ್ತಿದ್ದರು, ಬಂದಾಗ ನಮ್ಮೂರ ಸೇಡ್ಜಿಯ ಮನೆಯಲ್ಲಿ ಕುಳಿತು ಸಾಹಿತ್ಯವನ್ನು ಗಂಭೀರವಾಗಿ ಚರ್ಚಿಸುತ್ತಿದ್ದರು. 

ವ್ಯಾಪಾರಿಯಾಗಿದ್ದ ಸೇಡ್ಜಿಗೆ ಸಾಹಿತ್ಯದ ಗಂಧ, ಗಾಳಿ ಗೊತ್ತಿರದಿದ್ದರೂ ತಾನು ಎಲ್ಲದರಲ್ಲೂ ಆಸಕ್ತನಾಗಿದ್ದೇನೆ ಎನ್ನುವುದನ್ನು ತೋರಿಸಿಕೊಳ್ಳಲು ಬೇಂದ್ರೆ ಬಂದಾಗ ಅವರ ಮುಂದೆ ತಲೆಯಾಡಿಸುತ್ತಾ ಕುಳಿತುಕೊಳ್ಳುತ್ತಿದ್ದ. ತಕ್ಕ ಚಹಾ, ತಿಂಡಿಗಳ ವ್ಯವಸ್ಥೆಯನ್ನು ಮಾಡುತ್ತಿದ್ದ. ಆಗ ಬೇಂದ್ರೆ ‘ಮಂದಿ ಮದುವಿ’ ಎನ್ನುವ ನಾಟಕ ಬರೆಯುತ್ತಿದ್ದರು. ಅದರ ಓದನ್ನು ಚಡಚಣದ ಈ ಸೇಡ್ಜಿಯ ಮನೆಯಲ್ಲಿ ಇಟ್ಟುಕೊಂಡಿದ್ದರು. ಅತ್ತ ಸೇಡ್ಜಿಗೆ ಯಾವುದೋ ಊರಿಗೆ ಸಂತೆಗೆ ಹೋಗಬೇಕಾಗಿತ್ತು, ಇಲ್ಲಿ ನೋಡಿದರೆ ಬೇಂದ್ರೆ ನಾಟಕವನ್ನು ಗಂಭೀರವಾಗಿ ಚರ್ಚಿಸುತ್ತಿದ್ದಾರೆ. ಆತ ಎದ್ದು ಹೋಗುವ ಹಾಗೂ ಇಲ್ಲ, ಸಂತೆಯ ಸಮಯವಾದಿದ್ದರಿಂದ ನೆಮ್ಮದಿಯಿಂದ ಕೂಡ್ರುವ ಹಾಗೂ ಇಲ್ಲ. ಈತನ ಈ ದ್ವಂದ್ವ ಗಮನಿಸಿದ ಬೇಂದ್ರೆ ಸಿಟ್ಟಿನಿಂದ, ‘ ಏ  ಸೇಡ್ಜಿ ಎದ್ದು ಹೋಗುದಿದ್ರ ಮುಂದುಕ್ಕ ಹೋಗಿಬಿಡು. ಯಾಕ ಇಲ್ಲದ ನಾಟ್ಕಾ ಮಾಡ್ತಾ ನಾ ನಾಟಕೋದುದನ್ನ ಕೇಳಾಕ ಕುಂತೀದಿ. ನಿನ್ನ ಮನೀ ನಾಷ್ಟಾಕಾಗಿ ನಿನ್ನ ಇಲ್ಲದ ನಾಟಕ ನನಗ ಸಹಿಸಿಕೊಳ್ಳಕಾಗುದಿಲ್ಲ.’ ಎಂದ ಬೇಂದ್ರೆ ಬರಹವನ್ನು ತೆಗೆದುಕೊಂಡು ಹೊರಟೇ ಬಿಟ್ಟರು.
ಈ ಜಗಳದಲ್ಲಿ ಏನೆಲ್ಲಾ ಇದೆ. ನಮ್ಮ ಹಣ, ಅಧಿಕಾರ, ರೂಪ, ನಾವು ಕೊಡುವ ಒಂದಿಷ್ಟು ಸಮಾಧಾನಕ್ಕಾಗಿ ಜನ ನಮ್ಮ ಕಾಲು ನೆಕ್ಕಿಕೊಂಡು ಬಿದ್ದಿರುತ್ತಾರೆ, ನಾವು ಹೇಗೆ ನಡೆದರೂ ಒಪ್ಪಿಕೊಳ್ಳುತ್ತಾರೆ ಎನ್ನುವ ಉಡಾಫೆಯ ಮನೋಸ್ಥಿತಿಯವರಿಗೆ ಇಲ್ಲಿ ಕಲಿಯಲು ಸಾಕಷ್ಟಿದೆ. ವ್ಯಕ್ತಿಗೆ ಕೊಡುವ ತಿಳಿ ಮಜ್ಜಿಗೆಯೂ ಅಮೃತವಾಗಲು ಸಾಧ್ಯ, ಅಷ್ಟಕ್ಕಾಗಿಯೇ ಆತ ಸುಧಾಮನಂತೆ ನಿಮ್ಮ ಸೇವಕನಾಗಿರಲು ಸಾಧ್ಯ. ಆದರೆ ಅದು ಪ್ರಾಂಜಲವಾಗಿ ಬಂದುದಾಗಿರಬೇಕು. ಬೇಂದ್ರೆಗೆ ಬಡತನವಿತ್ತು, ಬಿಕಾರಿತನವಿರಲಿಲ್ಲ.
ತಿನ್ನುವ ಅನ್ನದಲ್ಲೂ ಮಲ್ಲಿಗೆಯ ಪರಿಮಳ ಮತ್ತು ಅರಳುವಿಕೆಯನ್ನು, ಮನೆಯ ನಾಯಿಯಲ್ಲೂ ಮಾತೃತ್ವದ ಮಹಾ ದರ್ಶನವನ್ನು ಮಾಡಿಕೊಳ್ಳುವ ಸಂಸ್ಕೃತಿ ಹೊಂದಿದ್ದ ಬೇಂದ್ರೆ ಕನ್ನಡ ನಾಡಿನ ವರ ಕವಿಯೇ ಹೌದು. ಕಾವ್ಯವನ್ನು ಬೇಂದ್ರೆ ಬರೆಯಲಿಲ್ಲ ಬದುಕಿದರು, ಅದರ ಹದಕ್ಕಾಗಿ ಏನೆಲ್ಲ ಕೆದಕಿದರು. ಹೀಗಾಗಿಯೇ ಬೇಂದ್ರೆ ಮಾತ್ರ ಪದ್ಯವನ್ನ ಕುರಿತು ಹೀಗೆ ಬರೆಯಲು ಸಾಧ್ಯವಾಯಿತು
ಹದಾ ಒಳಗ ಇಲ್ದ ತಮ್ಮಾ
ಪದಾ ಹೊರಗ ಬರೂದಿಲ್ಲಾ
ಕದಾ ತೆರ್ಯೂದಿಲ್ಲಾ ಅಂತಃಕರಣಾ

ವಾಸನಾಧಾಂಗ ಆವರಣಾ
ಕೊಂಡಾಂಗ ಆವ ಆಭರಣಾ

ಬೆಳಕಿನ್ಯಾಗ ಬಣ್ಣದಾ ಬೆಳಿ
ತನ್ನತನದಾಗ ನಿನ್ನ ಕಳಿ
ಉಳಿವಿಲಿಂಗದಾಗ ಉಳಿ

No comments:

Post a Comment